ಫೈಲಾಜನೀ

ಜೀವಿಗಳ ಯಾವುದೇ ಒಂದು ಪ್ರಭೇದದ ಅಥವಾ ಗುಂಪಿನ ವಿಕಾಸದ ಇತಿಹಾಸ. ಇದರ ಅರ್ಥವನ್ನು ಗುಂಪು ಅಥವಾ ಪ್ರಭೇದಕ್ಕೆ ಸೀಮಿತಗೊಳಿಸುವುದು ಸಾಮಾನ್ಯವಾಗಿದ್ದರೂ ವಿಶಾಲ ಗುಂಪೊಂದರ ವಿಕಾಸದ ಹಾದಿಯನ್ನು ಮತ್ತು ಆ ಗುಂಪಿನ ಜೀವಿಗಳ ನಡುವಿನ ಸಂಬಂಧವನ್ನು ಇದು ತಿಳಿಸುವುದು. ಹೀಗೆ ಇದು ವಿಕಾಸ ವಿವರಣಾತ್ಮಕ ಪದಕಲ್ಪನೆ. ಒಂದು ಸಾಮಾನ್ಯ ಜೀವಿ ಅಥವಾ ಗುಂಪು ತೋರುವ ವಿಕಾಸದ ಹಾದಿಯಲ್ಲಿ ವಿವಿಧ ರೀತಿಯ ಸಂಕೀರ್ಣತೆ ಪಡೆದ ಗುಂಪುಗಳ ವಿವರಣೆಯನ್ನು ಕ್ರಮಬದ್ಧವಾಗಿ ಜೋಡಿಸಲಾಗಿರುವುದು. ಜೀವವಿಕಾಸ ಪ್ರಾಣಿವೈವಿಧ್ಯವನ್ನು ಸೂಚಕವಾದ್ದರಿಂದ ವಿಕಾಸಮಾರ್ಗವನ್ನು ತಿಳಿಯಲು ಪ್ರಾಣಿವೈವಿಧ್ಯವನ್ನು ಅನುಕ್ರಮವಾಗಿ ಜೋಡಿಸಲಾಗುವುದು. ವಿಕಾಸಬಿಂಬಕ ಅನುಕ್ರಮ ಸಂಕೀರ್ಣತೆಯನ್ನು ನಾನಾ ವಿಧಾನಗಳಿಂದ ಪತ್ತೆ ಹಚ್ಚಲಾಗುವುದು. ವರ್ಗೀಕರಣ, ತುಲನಾತ್ಮಕ ಅಂಗರಚನಾಶಾಸ್ತ್ರ, ಭ್ರೂಣದ ಬೆಳವಣಿಗೆ, ಅಂಗ ರಚನಾವಿನ್ಯಾಸ(ಫೈಲಾಜನೀಗೆ ಪ್ರಮುಖ ಆಧಾರಗಳು. ತುಲನಾತ್ಮಕ ಲಕ್ಷಣ ವಿಶ್ಲೇಷಣೆಯಿಂದ ವರ್ಗೀಕರಣವನ್ನು ಮತ್ತು ಫೈಲಾಜನೀಯನ್ನು ರಚಿಸಲು ಅನುಕೂಲ. ಅನೇಕ ಜೀವಿಗಳನ್ನು ಮತ್ತು ಜೀವಿಗಳ ಗುಂಪುಗಳನ್ನು ಒಟ್ಟಿಗೆ ವಿಶ್ಲೇಷಿಸಿದಾಗ ಅವುಗಳ ರೂಪಸಾಮ್ಯ ಗಮನಕ್ಕೆ ಬರುತ್ತದೆ. ಈ ರೂಪ ಸಾಮ್ಯವನ್ನು ಒಂದಕ್ಕೊಂದು ತುಲನೆ ಮಾಡಿ ಹೋಲಿಸಿದಾಗ ವೈಕಾಸಿಕ ಚಿತ್ರ ದೊರೆಯುತ್ತದೆ. ಇದನ್ನು ಅನುಕ್ರಮವಾಗಿ ಜೋಡಿಸುವುದೇ ಫೈಲಾಜನೀ. ವರ್ಗೀಕರಣಮಲ್ಲಿ ಕ್ರಮಬದ್ಧ ಅಧ್ಯಯನದ ಮೂಲಕ ಪ್ರಾಣಿಗಳ ಮತ್ತು ಅವುಗಳ ಗುಂಪುಗಳ ವೈಕಾಸಿಕ ಬದಲಾವಣೆಗಳು ಗೊತ್ತಾಗುವಂತೆ ಫೈಲಾಜನೀಯನ್ನು ರಚಿಸಲಾಗುವುದು. ಇದರಿಂದ ವಿಕಾಸ ಒಂದು ಚಾರಿತ್ರಿಕ ಕ್ರಿಯೆಯೆಂದೂ ಅನುಕ್ರಮ ಬದಲಾವಣೆಗಳಿಂದ ಜೀವಿಗಳು ವಿಕಾಸಗೊಂಡಿವೆ ಎಂದೂ ತಿಳಿಯುವುದು. ಫೈಲಾಜನೀಯನ್ನು ಬೆಳೆವಣಿಗೆಯ ಆಧರದ ಮೇಲೂ ರಚಿಸಬಹುದು. ಜರ್ಮನ್ ಪ್ರಾಣಿ ವಿಜ್ಞಾನಿ ಹೆಕೆಲನ (1834-1919) ಪುನಃಸ್ಥಾಪನಾ ಸಿದ್ಧಾಂತದ (ತಿಯೊರಿ ಆಫ್ ರಿಕ್ಷ್ಯಾಪಿಚುಲೇಷನ್) ಪ್ರಕಾರ ಯಾವುದೇ ಪ್ರಾಣಿಯ ಭ್ರೂಣ ಬೆಳೆವಣಿಗೆಯಲ್ಲಿ ಅದರ ಪೂರ್ವಜ ಪ್ರಾಣಿಗಳ ರೂಪವನ್ನು ಸ್ಥೂಲವಾಗಿ ಕಾಣಬಹುದು. ಅಂದರೆ ಅದರ ಬೆಳೆವಣಿಗೆಯ ಕಾಲದಲ್ಲಿ ಅದರ ಪೂರ್ವಜಗಳ ಲಕ್ಷಣಗಳೆಲ್ಲ ಮರುಕೊಳಿಸುವುವು. ಮಾನವನ ಬೆಳೆವಣಿಗೆ ಸಹ ಏಕಕೋಶಾವಸ್ಥೆಯಿಂದಲೇ ಆರಂಭಗೊಳ್ಳುತ್ತದೆ; ಗರ್ಭಾಂಕುರಗೊಂಡ ಅಂಡದಿಂದ ಆರಂಭವಾಗಿ, ಕೆಲವು ಕೋಶಗಳ ಚೆಂಡಿನಿಂದ ಇಪ್ಪದರ ಜೀವಿಯ ಹಂತವನ್ನು ದಾಟಿ ಅನಂತರ ಅನುಕ್ರಮವಾಗಿ ಮೀನಿನ ಹಂತವನ್ನು ಹಾದು, ಬೆಳೆವಣಿಗೆ ಪೂರ್ಣಗೊಂಡಾಗ ಪ್ರಸ್ತುತ ಸ್ಥಿತಿಯನ್ನು ತಲಪುವುದು ಕಾಣಬರುತ್ತದೆ. ಪ್ರಾಣಿಗಳ ವೈವಿಧ್ಯವನ್ನೂ ಬೆಂಬಲಿಸುವ ವಿಕಾಸಸೂಚಿಯಾಗಿ ಫೈಲಾಜನೀ ವೃಕ್ಷ ಗೋಚರವಾಗುತ್ತದೆ. ಈ ಕಾಲ್ಪನಿಕ ವೃಕ್ಷದ ಎಲೆಗಳು, ಪ್ರಭೇದಗಳಾಗಿ ಟೊಂಗೆಗಳು ಜಾತಿಗಳಾಗಿ, ದಪ್ಪ ಟೊಂಗೆಗಳು ಕುಟುಂಬಗಳಾಗಿ ಹಾಗೆಯೇ ಮರದ ಬುಡ ಪ್ರಾಣಿ ಸಾಮ್ರಾಜ್ಯ ಸೂಚಿಯಾಗಿ, ಕವಲೋಪಕವಲುಗಳು ವರ್ಗ, ಗಣಗಳಾಗಿ ಬಿಂಬಿತವಾಗಿವೆ. ಆದರೆ ಯಾವುದೇ ಒಂದು ಸಸ್ಯದ ಎಲೆಗಳಂತೆ ಫೈಲಾಜನೀಯ ಎಲೆಗಳಲ್ಲಿ ಏಕರೂಪತೆ ಇರದು. ಕಾರಣ ಪ್ರಾಣಿಗಳಲ್ಲಿಯ ವಿಭಿನ್ನತೆ. ಇದರಿಂದ ಸಾಮ್ಯಗಳನ್ನು ಪತ್ತೆ ಹಚ್ಚುವುದು ಸಾಧ್ಯ. ಫೈಲಾಜನೀಯ ರಚನೆಯಲ್ಲಿ ಸಾಮಾನ್ಯವಾಗಿ ಮುಂದುವರೆದ ಪ್ರಾಣಿ ಗುಂಪುಗಳು ತುಲನೆಗೆ ಹೆಚ್ಚಿನ ಪ್ರಾಶಸ್ತ್ಯವಿದೆ. ಅಂತೆಯೇ ಫಾಸಿಲುಗಳು ಈ ಜೋಡಣೆಗೆ ಅನುಕೂಲವಾಗುತ್ತವೆ. (ಫಾಸಿಲುಗಳು ಅಪೂರ್ಣವಾಗಿದ್ದರೆ ಅವನ್ನೂ ಸಂಪೂರ್ಣವಾಗಿ ಅವಲಂಬಿಸುವಂತಿಲ್ಲ). ಮುಂದುವರೆದ ಪ್ರಾಣಿಗಳ ರಚನೆಗಳ ತುಲನಾತ್ಮಕ ಅಧ್ಯಯನದಿಂದಾಗಿ ಫೈಲಾಜನೀ ಸಂಕೀರ್ಣವಾಗುತ್ತದೆ. ಆದ್ದರಿಂದ ವರ್ಗೀಕರಣಕ್ಕೆ ಆಧಾರವಾದರೂಪಸಾಮ್ಯದ ವೈಕಾಸಿಕ ಬದಲಾವಣೆಗಳು ಫೈಲಾಜನೀಗೆ ಮಾರ್ಗಸೂಚಿಯಾದಂತೆ ಸಮಸ್ಯೆಗಳನ್ನೂ ಒಡ್ಡುತ್ತವೆ. ಆದ್ದರಿಂದಲೇ ಫೈಲಾಜನೀ ರಚನಕಾರರಲ್ಲಿ ಒಮ್ಮತ ಅಭಿಪ್ರಾಯವಿರದೆ ವಿವಿಧ ರೀತಿಯ ಫೈಲಾಜನೀಗಳು ರಚಿತಗೊಂಡಿವೆ.

	ಫೈಲಾಜನೀ ಮತ್ತು ವರ್ಗೀಕರಣ: ತಾತ್ತ್ವಕವಾಗಿ ಜೀವಶಾಸ್ತ್ರದ ಪ್ರತಿಯೊಂದು ವಿಷಯವೂ ಫೈಲಾಜನೀಗೆ ಆಧಾರವೆನಿಸಿದರೂ ನಿರ್ದಿಷ್ಟವಾಗಿ ಕೆಲವು ವಿಷಯಗಳು(ತುಲನಾತ್ಮಕ ರಚನಾಶಾಸ್ತ್ರ, ವರ್ಗೀಕರಣ, ಫಾಸಿಲುಗಳ ಅಧ್ಯಯನ-ಉಳಿದವುಗಳಿಗಿಂತ ಹೆಚ್ಚು ಉಪಯುಕ್ತವೆನಿಸಿವೆ. ಒಂದೇ ರೀತಿಯ ವಿಷಯವನ್ನು ವಿವಿಧ ಶಾಸ್ತ್ರಜ್ಞರು ವಿಭಿನ್ನ ರೀತಿಯಲ್ಲಿ ಅರ್ಥವಿಸಿ ಬೇರೆ ಬೇರೆ ಫೈಲಾಜನೀಗಳನ್ನು ರಚಿಸಿದ್ದಾರೆ. ಆದರೆ ಸರ್ವಸಮ್ಮತ ರೀತಿಯ ತೀರ್ಮಾನಗಳ ಮೇಲೆ ವಿವಿಧ ಗುಂಪುಗಳ ಮೇಲೆ ಫೈಲಾಜನೀ ರಚನೆಯ ಪ್ರಯತ್ನ ನಡೆದಿದೆ.

	ಕ್ಲಾಡಿಸಮ್ ವಿಧಾನದ ವರ್ಗೀಕರಣದಲ್ಲಿ ಮೇಲೆ ಹೇಳಿದ ಫೈಲಾಜನೀ ಮರದ ಕವಲುಗಳನ್ನು ಮತ್ತು ಸಾಮಾನ್ಯ ಮೂಲವನ್ನು ಅನುಸರಿಸಲಾಗಿದೆ. ಇದು ಫೈಲೋಜೆನೆಟೆಕ್ ವರ್ಗೀಕರಣ ಅಂದರೆ ಸಂಪೂರ್ಣವಾಗಿ ವಿಕಾಸದ ಮಾರ್ಗಗಳನ್ನು ಆಧರಿಸಿ ವರ್ಗೀಕರಿಸುವ ವಿಧಾನ (ಮೇಯರ್, 1965). ತುಲನಾತ್ಮಕ ಲಕ್ಷಣ ವಿಶ್ಲೇಷಣೆಯಿಂದ ವರ್ಗೀಕರಣ ಮತ್ತು ಫೈಲಾಜನೀಗಳನ್ನು ರಚಿಸುವುದೂ ಉಂಟಂ. ಫೈಲಾಜನೀ ವರ್ಗೀಕರಣದ ಮೇಲಾಗಲೀ ಅಥವಾ ವರ್ಗೀಕರಣ ಫೈಲಾಜನೀಯ ಮೇಲಾಗಲೀ ಸಂಪೂರ್ಣವಾಗಿ ಅವಲಂಬನೆಗೊಂಡಿಲ್ಲ. ಸ್ವಾಭಾವಿಕ ಗುಂಪುಗಳು ಲಕ್ಷಣಗಳನ್ನು ತಾಳೆ ಮಾಡುವುದರ ಮೂಲಕ ಜೀವಿಗಳ ಮತ್ತು ಅವುಗಳ ಲಕ್ಷಣಗಳನ್ನು ಎಚ್ಚರಕೆಯಿಂದ ಹೋಲಿಸಿ ಅವುಗಳ ಸಾಮ್ಯ ಮತ್ತು ವ್ಯತ್ಯಾಸಗಳನ್ನು ಗುರುತಿಸಿ ಈ ಎರಡೂ ಶಾಸ್ತ್ರಗಳನ್ನು ರೂಪಿಸಲಾಗುವುದು. ವರ್ಗೀಕರಣಕ್ಕೆ ಫೈಲಾಜನೀ ಅರ್ಥಪೂರ್ಣವಾಗಿದೆ. ಏಕೆಂದರೆ ವಿಕಾಸಗೊಂಡ ಹಾಗೂ ವಿಕಾಸನಗೊಳ್ಳುತ್ತಿರುವ ಬದಲಾವಣೆಗಳನ್ನು ಪರಿಗಣಿಸಿ ವರ್ಗೀಕರಣ ಮಾಡಲಾಗುವುದು. ಫೈಲಾಜನೀಯ ಅಂಶಗಳಿಂದ ಹಿಂದುಳಿದ, ಮುಂದುವರೆದ ಲಕ್ಷಣಗಳು ತಿಳಿಯುವುವು. ಎಲ್ಲ ಜೀವಿಗಳೂ ವಿಕಾಸದಿಂದ ರೂಪುತಳೆದಿವೆ. ಆದ್ದರಂದ ವರ್ಗೀಕರಣದಲ್ಲಿ ಫೈಲೋಜನಿಟಿಕ್ ಅಂಶಗಳನ್ನು ಒರೆಹಚ್ಚಲು ಅವಕಾಶವಾಗುವುದು. ವರ್ಗೀಕರಣದ ಏಕೈಕ ಗುರಿಯೂ ಇದೇ ಆಗಿದ್ದು ಈ ರೀತಿ ವಿಂಗಡಿಸುವಾಗ ವೈಕಾಸಿಕ ಸಂಬಂಧಗಳನ್ನು ತೋರಿಸಲಾಗುವುದು. ವಿಂಗಡಿಸಲ್ಪಟ್ಟ ಜೀವಿಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಲಿಸಿದಾಗ ರೂಪಸಾಮ್ಯ ದೊರೆತು ವೈಕಾಸಿಕ ಸಂಬಂಧವನ್ನು ತಿಳಿದಕೊಳ್ಳಬಹುದು.

	ಗುಂಪು ಹಾಗೂ ಉಪಗುಂಪುಗಳನ್ನು ಫೈಲಾಜನೀಯ ಕವಲು ಉಪಕವಲುಗಳು ಪ್ರತಿನಿಧಿಸುತ್ತಿದ್ದು ಇಲ್ಲಿ ಸಾವಿರಾರು ಅಥವಾ ಲಕ್ಷಾಂತರ ಪೀಳಿಗೆಗಳನ್ನು ಕಾಣಬಹುದು. ವ್ಯತ್ಯಯ, ಪುನಸ್ಸಂಯೋಜನೆ, ಆಯ್ಕೆ, ಜೀನ್ ಬದಲಾವಣೆ ಮುಂತಾದವುಗಳ ಮುಖಾಂತರ ಪೀಳಿಗೆಗಳ ನಡುವೆ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಆಯ್ಕೆಯ ಒತ್ತಡದಿಂದ ಸಮೀಪ ಸಂಬಂಧಿಗಳಲ್ಲೇ ಭೇದವಿರಬಹುದು. ಈ ದೃಷ್ಟಿಯಿಂದ ನೋಡಿದಾಗ ಮೊಸಳೆಗಳು ಪಕ್ಷಿಗಳ ಸಮೀಪ ಸಂಬಂಧಿಗಳಾದರೂ (ಎರಡು ಗುಂಪುಗಳೂ ಸೂಡೋಸೂಕಿಯ ಗುಂಪುಗಳಿಂದ ಹುಟ್ಟಿವೆ) ಒಟ್ಟಾರೆ ಜೀನ್ ಸಂರಚನೆಯಲ್ಲಿ ಮೊಸಳೆಗಳು ಮೂಲಜೀವಿಗಳಾದ ಸರೀಸೃಪಗಳಂತೆ ಇವೆಯೇ ಹೊರತು ಬದಲಾದ ಜೀನ್‍ಸಂರಚನೆಯುಳ್ಳ ಪಕ್ಷಿಗಳಂತಿಲ್ಲ (ಹಾರಾಟದ ಹೊಂದಾಣಿಕೆಗಳಿಗೆ ತಕ್ಕಂತೆ ಪಕ್ಷಿಗಳು ಭಿನ್ನವಾಗಿವೆ). ಸರೀಸೃಪಗಳ ಫೈಲಾಜನೀಯಲ್ಲಿ ಪಕ್ಷಿಗಳು ಮತ್ತು ಮೊಸಳೆಗಳು ಇತ್ತೀಚೆಗೆ ಕಾಣಿಸಿಕೊಂಡಿವೆಯಾದರೂ ಮೊಸಳೆಗಳು ಮಾತ್ರ ಪೂರ್ವ ಸಂಬಂಧಿಗಳಾದ ಸರೀಸೃಪಗಳ ರೀತಿಯಲ್ಲಿವೆ.

	ಫೈಲಾಜನೀ ಆಧಾರ ಉಳ್ಳ ಕ್ಲಾಡಿಸ್ಟಿಕ್ ವರ್ಗೀಕರಣದಲ್ಲಿ ವಸ್ತುಸ್ಥಿತಿ ಸ್ಥಾನ ಆ ಗುಂಪಿನ ಆಯುಃಪ್ರಮಾಣದಿಂದ ಸ್ವತಂತ್ರವಾಗಿಲ್ಲ. ಏಕೆಂದರೆ ಒಂದು ಗುಂಪಿನ ವಿಂಗಡಣೆಗೆ ಆ ಗುಂಪಿನ ಉಗಮಕಾಲವೂ ಅದರ ತುಲಾನಾತ್ಮಕ ವಿಮರ್ಶೆಯೂ ಅಗತ್ಯ ಎಂದು ಹೆನ್ನಿಂಗ್ ಎಂಬ ವಿಜ್ಞಾನಿಯ ಅಭಿಪ್ರಾಯ. ಶಮ್‍ರೋವ್ ಅವರ ಅಭಿಪ್ರಾಯದಂತೆ ಒಂದು ಹೊಸ ಗುಂಪು ಮೂಲಗುಂಪಿನಿಂದ ಉಗಮವಾದರೂ ಪಿತೃವರ್ಗವೂ (ಮೂಲಗುಂಪೂ) ಹೊಸ ಗುಂಪಿನ ಜೊತೆಯಲ್ಲೇ ಲಕ್ಷಾಂತರ ವರ್ಷಗಳ ಕಾಲ ಮುಂದುವರಿಯುವುದು. ಇಂಥ ಉದಾಹರಣೆಗಳಲ್ಲಿ ಮೂಲಗುಂಪು ಪಿತೃಜೀವಿಗಳದ್ದಾದರೂ ಹೊಸಗುಂಪುಗಳಿಗೆ ಸೋದರಿ ಗುಂಪಾಗಿ ಉಳಿಯುತ್ತದೆ. ಉದಾಹರಣೆಗೆ ಚತುಷ್ಪಾದಿ ಪ್ರಾಣಿಗಳ ಫೈಲಾಜನೀಯಲ್ಲಿ ಕ್ರಾಸಾಪ್ಟರಿಜೀಯ ಮೀನುಗಳಿಂದ ವಿವಿಧ ಕಶೇರುಕ ಗುಂಪುಗಳು ಒಂದರಿಂದ ಒಂದು ಉಂಟಾಗಿದೆ. ಆದರೂ ಎಲ್ಲವೂ ಜೊತೆಯಲ್ಲಿಯೇ ಮುಂದುವರಿಯುವ ಸೋದರಿ ಗುಂಪುಗಳಾಗಿವೆ. ಕ್ರಾಸಾಪ್ಟರಿಜೀಯಿಂದ ದ್ವಿಚರಿಗಳೂ ದ್ವಿಚರಿಗಳಿಂದ ಸರೀಸೃಪಗಳೂ ಇವುಗಳಿಂದ ಸ್ತನಿಪಕ್ಷಿಗಳೂ ಉದ್ಭವವಾಗಿವೆಯಾದರೂ 5 ಗುಂಪುಗಳೂ ಸಮವಾಗಿ ಮುಂದುವರಿಯುತ್ತಿವೆ. ಆದ್ದರಿಂದ ವರ್ಗೀಕರಣ ಫೈಲಾಜನೀಯ ಮೇಲಾಗಲೀ, ಫೈಲಾಜನೀ ವರ್ಗೀಕರಣದ ಮೇಲಾಗಲೀ ಅವಲಂಬಿಸಿಲ್ಲ. ಇದಕ್ಕೆ ಬದಲಾಗಿ ಎರಡೂ ವಿಧಾನಗಳು ಸ್ವಾಭಾವಿಕ ಗುಂಪುಗಳ ತುಲನಾತ್ಮಕ ವಿಶ್ಲೇಷಣೆಯನ್ನು ಅವಲಂಬಿಸಿವೆ. ಜೀವಿಗಳ ನಡುವಿನ ಸಾಮ್ಯ ಮತ್ತು ವ್ಯತ್ಯಾಸಗಳು ಗಮನಾರ್ಹ. ಇದರಲ್ಲಿ ಫೈಲಾಜನೀ ವರ್ಗೀಕರಣಕ್ಕೆ ಅರ್ಥಪೂರ್ಣವಾದುದಾಗಿದೆ. ವಿಕಾಸಗೊಂಡ ಮತ್ತು ವಿಕಾಸಗೊಳ್ಳುವ ಲಕ್ಷಣಗಳು ವರ್ಗೀಕರಣಕ್ಕೆ ಸಹಕಾರಿಯಾಗುವಂತೆ ಫೈಲಾಜನೀಗೆ ಮುಂದುವರಿದ, ಹಿಂದುಳಿದ ಮೂಲಭೂತ ಲಕ್ಷಣಗಳು ಗಮನಕ್ಕೆ ಬರುತ್ತವೆ. ವರ್ಗೀಕರಿಸುವಾಗ ಸಂಬಂಧಿಗಳು ಒರೆಹಚ್ಚಲ್ಪಡುವಂತೆ ಫೈಲಾಜನೀ ಅಂಶಗಳೂ ಒರೆಹಚ್ಚಲ್ಪಡುತ್ತವೆ. ಆದ್ದರಿಂದ ಇವೆರಡೂ ಒಂದಕ್ಕೊಂದು ಪೂರಕವಾಗಿವೆ.

	ಫೈಲಾಜನೀ ವಿಧಾನ: ಫೈಲಾಜನೀಯ ಆರಂಭದ ಘಟ್ಟಗಳು ಜೀವದ ಉಗಮಕ್ಕೆ ಮತ್ತು ಪ್ರಾರಂಭಿಕ ವಿಭಿನ್ನೀಕರಣದೊಂದಿಗೆ ಮಿಳಿತವಾಗಿವೆ. ಜೀವದ ಉಗಮಕಾಲದ ಅವಶೇಷಗಳು ಲಭ್ಯವಿಲ್ಲವಾದರೂ ಸುದೀರ್ಘ ರಾಸಾಯನಿಕ ವಿಕಾಸದಿಂದ ಜೀವಿ ಆರಂಭವಾಯಿತೆಂಬುದು ನಿರ್ವಿವಾದ. ಪುರಾತನ ಭೂಮಿಯಲ್ಲಿ ಮೂಲವಸ್ತುಗಳ ಅನುಕ್ರಮ ಸಂಯೋಜನೆಯಿಂದ ಭೂಚಿಪ್ಪು ಮತ್ತು ವಾಯುಮಂಡಲದ ರಾಸಾಯನಿಕಗಳು ಪರಿವರ್ತಿತವಾಗಿ ಅನೇಕ ಸಂಯುಕ್ತಗಳು ರೂಪುಗೊಂಡಿವೆ. ತತ್ಫಲವಾಗಿ ಪುರಾತನ ಸಾಗರಗಳು ಅನೇಕ ಜೀವರಾಸಾಯನಿಕ ವಸ್ತುಗಳ ರಸಪಾಕಗಳಂತಾಗಿದ್ದುವು. ಇವುಗಳಲ್ಲಿ ಸಾವಯವ ವಸ್ತುಗಳು ಅದರಲ್ಲೂ ಪ್ರೋಟೀನ್‍ಗಳಂಥವು ಸ್ವಯಂ ವೇಗವರ್ಧಕಗಳಂತೆ ವರ್ತಿಸಿ ಇತರ ವಸ್ತುಗಳ ಸಹವರ್ತನೆಯಿಂದ ಒಂದು ಪರಿಮಿತ ಪಟಲದ ಹೊದಿಕೆಯೊಂದಿಗೆ ತಮ್ಮದೇ ರೀತಿಯ ವಸ್ತುಗಳ ಉತ್ಪಾದಕ ಚೈತನ್ಯ ಪಡೆದು ಜೀವಕೋಶಯುಕ್ತ ಜೀವಿಗಳಾದುವು. ಇವನ್ನೇ ಮೂಲಜೀವಿಗಳು ಎನ್ನಬಹುದು. ಇವುಗಳಲ್ಲಿ ದೈತ್ಯಾಣುಗಳು ಮತ್ತು ಪ್ರೋಟೀನ್‍ಗಳು ಮುಖ್ಯವೆನಿಸಿವೆ. ಇದಕ್ಕೂ ಮುಂಚೆಯೇ ಸ್ವಯಂ ವೃದ್ಧಿಗೊಳ್ಳಬಲ್ಲ ಪ್ರೋಟೀನ್‍ಗಳು ರೂಪುತಳೆದಿರಬಹುದೆಂದು ಕೆಲವರ ವಾದ. ಆದರೆ ಜೀವಿಯ ಕನಿಷ್ಠ ರೂಪವೆನಿಸುವ ವೈರಸ್ಸು ಡಿಎನ್‍ಎ ಮತ್ತು ಪ್ರೋಟೀನ್ ಕವಚದಿಂದ ರಚಿತವಾಗಿದೆ. ಪ್ರತಿಯೊಂದು ಜೀವಕೋಶದ ಕೇಂದ್ರದಲ್ಲಿ ಇರುವ ನ್ಯೂಕ್ಲಿಯೋಪ್ರೋಟೀನ್ ಸಂಯುಕ್ತಗಳಾದ ಕೋಮೊಸೋಮುಗಳೇ ಕೋಶನಿಯಂತ್ರಕಗಳೂ ಮತ್ತು ಆನುವಂಶಿಕ ವಾಹಕಗಳು. ಇಂದು ಸಸ್ಯ_ಪ್ರಾಣಿ ಬ್ಯಾಕ್ಟೀರಿಯ ಕೋಶಗಳಲ್ಲಿ ಪರಾವಲಂಬಿಗಳಾಗಿ ಜೀವಿಸುವ ವೈರಸ್‍ಗಳು ಮೊದಲು ಪುರಾತನ ಸಾವಯುವ ಸಾಗರಗಳಲ್ಲಿ ಜೀವಿರೂಪಗಳಾಗಿ ಪ್ರಾರಂಭವಾಗಿರಬಹುದು. ಡಿಎನ್‍ಎಯಲ್ಲಿ ಉಂಟಾದ ಉತ್ಪರಿವರ್ತನೆ (ವ್ಯತ್ಯಯ) ಮತ್ತು ಆಕಸ್ಮಿಕ ವೈಪರೀತ್ಯಗಳು ಸಂಕೀರ್ಣ ತಳಿಗಳಿಗೆ ಕಾರಣವೆನಿಸಿರಬಹುದು. ಇದರಿಂದ ಸಾವಯವ ವಸ್ತುಗಳ ಸಾಗರ ವೈರಸ್‍ಗಳ ಉತ್ಪರಿವರ್ತನೆಯ ಮೂಲಕ ಸ್ವತಂತ್ರವಾಗಿ ಆಹಾರ ತಯಾರಿಸಬಲ್ಲ ಸ್ವಯಂಪೋಷಕ ಘಟಕಗಳೂ ತನ್ಮೂಲಕ ಸಂಕೀರ್ಣ ಕಿಣ್ವಮಂಡಲದಿಂದ ಕೂಡಿದ ಜೀವಕೋಶೀಯ ಜೀವಿಗಳೂ ರೂಪುಗೊಂಡಿರಬಹುದು. ಆದ್ದರಿಂದ ಪ್ರಾರಂಭಿಕ ಜೀವಿಯೆಂದರೆ ಸಾಗರದ ಸಾವಯವ ವಸ್ತುಗಳಿಂದ ಅರ್ಥಾತ್ ಬೇರೆ ಮೂಲದಿಂದ ಆಹಾರ ಪಡೆದು ಬದುಕುವ ಪರಪೋಷಿ ಜೀವಿ. ಇವುಗಳಿಂದ ಸಂಕೀರ್ಣ ಕಿಣ್ವಪಥಗಳನ್ನು ಬೆಳೆಸಿಕೊಂಡು ರಾಸಾಯನಿಕ ವಸ್ತುಗಳ ನೆರವಿನಿಂದ ಆಹಾರ ತಯಾರಿಸಿ, ಸಂಗ್ರಹಿಸಿ ಬೇಕಾದಾಗ ಮಧ್ಯವರ್ತಿ ಕ್ರಿಯೆಯಿಂದ ಶಕ್ತಿ ಬಿಡುಗಡೆ ಮಾಡಿಕೊಳ್ಳುವಂಥ ಬ್ಯಾಕ್ಟೀರಿಯಗಳು ರೂಪಿತವಾಗಿರಬಹುದು. ಇಂಥ ಬ್ಯಾಕ್ಟೀರಿಯಗಳು ವಿವಿಧ ಆಹಾರ ಉಸಿರಾಟ ಕ್ರಮಗಳನ್ನು ಬೆಳೆಸಿಕೊಂಡು ಪರಾವಲಂಬನೆಗೆ ಸನ್ನದ್ಧವಾದುವು. ಸತ್ತವುಗಳಿಂದ ಆಹಾರ ಪಡೆಯುವ ಮೃತೋಪ ಜೀವಿಗಳಾಗಿ ಕೆಲವು ಬೆಳೆದವು. ಮತ್ತೆ ಕೆಲವು ಗಂಧಕ, ಕಬ್ಬಿಣ, ಸಾರಜನಕ ವಸ್ತುಗಳಿಂದ ಉತ್ಕರ್ಷಣೆ ನಡೆಸಿ ರಸಸಂಶ್ಲೇಷಿಸ್ವಯಂಪೋಷಿಗಳಾದುವು. ಗಂಧಕ ತಿನ್ನುವ ಬ್ಯಾಕ್ಟೀರಿಯಗಳು ಸೂರ್ಯರಶ್ಮಿಯನ್ನು ಹೀರಿ ಶಕ್ತಿ ಪಡೆಯುತ್ತವೆ. ಬ್ಯಾಕ್ಟೀರಿಯಗಳ ಹರಿತ್ತು, ಪ್ಲಾಸ್ಟಿಡ್‍ಗಳಲ್ಲಿ ಅಡಕವಾಗಿಲ್ಲ; ಇದರಿಂದಾಗಿ ಇವು ಹಸುರು ಸಸ್ಯಗಳಿಂದ ಭಿನ್ನವಾಗಿವೆ. ಅನಂತರ ನೀಲಿಹಸುರು ಪಾಚಿಗಳು ರೂಪುಗೊಂಡು ಯಥೇಚ್ಛವಾಗಿ ಆಕ್ಸಿಜನ್ ಬಿಡುಗಡೆಗೆ ಕಾರಣವಾಗಿರಬಹುದು. 200 ಅಥವಾ 300 ಕೋಟಿ ವರ್ಷಗಳ ಹಿಂದೆ ಈ ರೀತಿ ಮುಕ್ತವಾದ ಆಕ್ಸಿಜನ್ ವಾಯುಮಂಡಲವನ್ನು ಸೇರಿ ಆಕ್ಸಿಜನ್‍ಮಯ ವಾತಾವರಣ ಸೃಷ್ಟಿಯಾಗಿ ಉನ್ನತ ಜೀವಿಗಳ ಆರಂಭಕ್ಕೆ ವೇದಿಕೆ ನಿರ್ಮಾಣವಾಯಿತು. ಹರಿತ್ತಿನ ನೆರವಿನಿಂದ ದ್ಯುತಿ ಸಂಶ್ಲೇಷಣೆ ಸರಾಗವಾಗಿ ನಡೆಯುವಂತೆ ಉತ್ಕರ್ಷಣ ಕ್ರಿಯೆಗೆ ಬೇಕಾದ ಕಚ್ಚಾವಸ್ತುವಾದ ಆಹಾರದಿಂದ ಅಧಿಕ ಶಕ್ತಿ ಬಿಡುಗಡೆಗೆ ಕಾರಣವಾದ ಆಕ್ಸಿಜನ್ ದೊರೆಯುವಂತಾಗಿ ಇಡೀ ಜೀವಪ್ರಪಂಚದಲ್ಲೇ ಕ್ರಾಂತಿ ಉಂಟಾಯಿತು. ಇದರಿಂದ ನೀಲಿ ಹಸುರು ಹಾಗೂ ಇತರ ಬಗೆಯ ಪಾಚಿಗಳು, ಹಾವಸೆಗಳು, ಏಕಕೋಶ ಪ್ರಾಣಿ ಮತ್ತು ವಿಭಿನ್ನ ಸಸ್ಯ ಹಾಗೂ ಪ್ರಾಣಿ ಸಮುದಾಯಗಳು ವಿಕಸನಗೊಂಡವು. ಯೂಗ್ಲಿನ ರೀತಿಯವು ಸಸ್ಯ ಮತ್ತು ಪ್ರಾಣಿ ಪ್ರಪಂಚಗಳಿಗೆ ಸಂಬಂಧ ಕಲ್ಪಿಸುತ್ತವೆ, ಕಂದುಪಾಚಿಗಳಿಂದ (ಫಿಯೋಫೈಟ) ಪ್ರಾಣಿಗಳು ಆರಂಭವಾದುವು ಎಂದು ಒಂದು ವಾದ ಇದೆ. ಹರಿತ್ತಿಲ್ಲದ ಶಿಲೀಂಧ್ರಗಳಿಂದ ಪ್ರಾಣಿಗಳು ಉದ್ಭವವಾಗಿರಬಹುದು ಎಂಬ ಅಭಿಪ್ರಾಯವೂ ಉಂಟು. ಆಹಾರ ಕ್ರಮ, ಚಲನೆ ರಚನೆ, ವರ್ತನೆ ಮುಂತಾದವುಗಳ ಆಧಾರದ ಮೇಲೆ ಜೀವ ಪ್ರಪಂಚವನ್ನು ಎರಡು ಸಾಮ್ರಾಜ್ಯಗಳಾಗಿ [ಸಸ್ಯಗಳು (ಪ್ಲಾಂಟೇ) ಮತ್ತು ಪ್ರಾಣಿಗಳು (ಅನಿಮೇಲಿಯ)] ಗುರುತಿಸಲಾಯಿತು. ಇವು ಇಡೀ ಜೀವಿಗಳ ಎರಡು ಪ್ರಧಾನ ಗುಂಪುಗಳೆಂದು ಪರಿಗಣಿಸಲಾಗಿತ್ತು. ಬಹುಕೋಶಿಪಾಚಿಗಳನ್ನು ಸಸ್ಯ ಸಾಮ್ರಾಜ್ಯಕ್ಕೂ ಏಕಕೋಶಿ ಪ್ರಾಣಿಗಳನ್ನು ಪ್ರಾಣಿಸಾಮ್ರಾಜ್ಯಕ್ಕೂ ಸೇರಿಸಲಾಯಿತು. ಆದರೆ ಕೆಲವು (ಪ್ರೋಟೊಜೋವ) ಏಕಕೋಶಿ ಪ್ರಾಣಿಗಳನ್ನು ಮತ್ತು ಸಸ್ಯಗಳನ್ನು ಪ್ರತ್ಯೇಕಿಸುವುದು ಬಹಳ ಕ್ಲಿಷ್ಟ ಸಮಸ್ಯೆಯಾಯಿತು. ಇದರಿಂದಾಗಿ ಸಸ್ಯ ಮತ್ತು ಪ್ರಾಣಿ ವಿವರಣೆಯ ಮರು ಪರಿಶೀಲನೆ ಅಗತ್ಯವಾಯಿತು. ಏಕಕೋಶಿ ಸಸ್ಯ ಮತ್ತು ಪ್ರಾಣಿಗಳೆರಡನ್ನೂ ಸಸ್ಯ ಸಾಮ್ರಾಜ್ಯಕ್ಕೇ ಸೇರಿಸಲು ಇರುವ ತೊಡಕುಗಳನ್ನು ಮುಚ್ಚಲು ಪ್ರಯತ್ನಿಸಲಾಯಿತು. ಇದೇ ಸಂದರ್ಭದಲ್ಲಿ ವೈರಸ್‍ಗಳ ಸ್ಥಾನದ ಬಗ್ಗೆ ಮತ್ತು ಅವು ಜೀವಿಗಳೇ ಅಲ್ಲವೇ ಎಂಬ ಬಗ್ಗೆ ಜಿಜ್ಞಾಸೆ ಮೂಡಿತು. ಹೀಗೆ ಅಧ್ಯಯನದಿಂದ ವಿಷಯ ಸಂಗ್ರಹಣೆ ಹಬ್ಬಿದಂತೆಲ್ಲ ಸಮಸ್ಯೆಗಳು ಅಧಿಕಗೊಂಡು ವರ್ಗೀಕರಣ ಮತ್ತು ಫೈಲಾಜನೀಗಳು ಪರಿಷ್ಕರಣಕ್ಕೆ ಒಳಗಾದುವು. ಈ ಸಮಸ್ಯೆಗೆ ಅಂತಿಮ ಪರಿಹಾರವಾಗಿ 3 ಅಥವಾ 4 ಸಾಮ್ರಾಜ್ಯಗಳು ಅನಿವಾರ್ಯ ಮತ್ತು ಸ್ವಾಭಾವಿಕ ಎಂದು ಹಲವಾರು ಜೀವಶಾಸ್ತ್ರಜ್ಞರು ಅಭಿಪ್ರಾಯ ತಳೆಯುವಂತಾಯಿತು. ಬ್ಯಾಕ್ಟೀರಿಯ, ನೀಲಿಹಸುರು ಪಾಚಿಗಳನ್ನು (1) ಮೈಕೋಟ ಅಥವಾ ಮಾನೀರ ಎಂದೂ (ವೈರಸ್‍ಗಳನ್ನು ನಿರ್ಜೀವಿಗಳೆಂದು ಕೈಬಿಡಲಾಗಿದೆ) ಏಕಕೋಶ ಜೀವಿಗಳನ್ನು ಮತ್ತು (ಹಸುರು ಪಾಚಿಗಳನ್ನು ಬಿಟ್ಟು) ಉಳಿದ ಪಾಚಿಗಳನ್ನು (2) ಪ್ರೋಟಿಸ್ಟ ಎಂದೂ ಹಸುರು ಪಾಚಿಗಳು, ಹಾವಸೆಗಳು, ಮುಂದುವರೆದ ಸಸ್ಯಗಳನ್ನು (3) ಪ್ಲಾಂಟೇ ಎಂದೂ ಬಹುಕೋಶ ಪ್ರಾಣಿಗಳನ್ನು (4) ಅನಿಮೇಲಿಯ ಎಂದೂ ಒಟ್ಟು ನಾಲ್ಕು ಸಾಮ್ರಾಜ್ಯಗಳಾಗಿ ಜೀವಿಗಳನ್ನು ವಿಂಗಡಿಸಲಾಗಿದೆ. ಸಾಮ್ರಾಜ್ಯಗಳು ಮೂರು ಇರುವಂಥ ಪದ್ಧತಿಯಲ್ಲಿ ಪ್ರೋಟಿಸ್ಟ್ ಗುಂಪಿನವು ಪ್ರಾಣಿ ಮತ್ತು ಸಸ್ಯಗಳ ಗುಂಪುಗಳಲ್ಲಿ ಹಂಚಿ ಹೋಗಿದ್ದು ಸಸ್ಯ (ಪ್ಲಾಂಟೇ), ಪ್ರಾಣಿ (ಅನಿಮೇಲಿಯ) ಹಾಗೂ ಬಿಟ್ಟರೆ ಮೈಕೋಟ ಅಥವಾ ಮಾನೀರ ಎಂಬ ಸಾಮ್ರಾಜ್ಯಗಳಿವೆ. ಇದನ್ನೇ ಮತ್ತೊಂದು ರೀತಿಯಲ್ಲಿ (1) ಪ್ರೋಟಿಸ್ಟ (ಮಾನೀರ, ಪಾಚಿಗಳು, ಶಿಲೀಂಧ್ರ ಮತ್ತು ಏಕಕೋಶ ಪ್ರಾಣಿಗಳು ಸೇರಿ) (2) ಸಸ್ಯ (3) ಪ್ರಾಣಿ ಸಾಮ್ರಾಜ್ಯಗಳೆಂದು ಪರಿಗಣಿಸುವುದೂ ಉಂಟು.

	ಕೋಶವ್ಯವಸ್ಥೆಯಲ್ಲಿ ಆದಿಕೋಶಿಗಳು (ಪ್ರೋಕ್ಯಾರಿಯೋಟ್ಸ್) ಮತ್ತು ನಿಜಕೋಶಿಗಳು (ಯೂಕ್ಯಾರಿಯೋಟ್ಸ್) ಎಂಬ ಕಲ್ಪನೆ ಬಂದಮೇಲೆ ಹಳೆಯ ಆಧಾರಗಳೂ ಸಡಿಲಗೊಂಡು ಹಿಂದುಳಿದ ಮತ್ತು ಮುಂದುವರೆದ ಲಕ್ಷಣಗಳು; ಪುರಾತನ ಕಾಲ ಅಥವಾ ಆರಂಭ ಸ್ಪಷ್ಟವಾಗತೊಡಗಿದವು. ಬ್ಯಾಕ್ಟೀರಿಯ ಮತ್ತು ನೀಲಿ ಹಸುರು ಪಾಚಿಗಳಲ್ಲಿ ಕೋಶಕೇಂದ್ರ ಭಿತ್ತಿ ಇಲ್ಲ. ಆದ್ದರಿಂದ ಇವನ್ನು ಕೋಶಕೇಂದ್ರ ಆರಂಭವಾಗುವ ಆದಿಕೋಶಗಳು (ಪ್ರೋಕ್ಯಾರಿಯೋಟುಗಳು) ಎಂದೂ ಉಳಿದವನ್ನು ಕೋಶಕೇಂದ್ರ ಪೊರೆಯುಳ್ಳ ನಿಜಕೋಶಿಗಳು (ಯೂಕ್ಯಾರಿಯೋಟುಗಳು) ಎಂದೂ ಪರಿಗಣಿಸಲಾಯಿತು. ಪ್ರೋಕ್ಯಾರಿಯೋಟುಗಳಲ್ಲಿ ಡಿಎನ್‍ಎ ಸಹ ಮುಕ್ತರೂಪದಲ್ಲಿವೆ; ಪ್ರೋಟೀನ್ ಜೊತೆಗೂಡಿ ಕ್ರೋಮೊಸೋಮ್ ಆಗಿ ರೂಪುಗೊಂಡಿಲ್ಲ. ಲಿಂಗರೀತಿಯ ವ್ಯವಸ್ಥೆಯೂ ಉತ್ತಮವಾಗಿಲ್ಲ. ಕೋಶದ್ರವ್ಯ (ಸೈಟೋಪ್ಲಾಸಮ್) ಸರಳವಾದುದು (ಹರಿಯುವ ರೀತಿಯಲ್ಲಿ ಇಲ್ಲ). ರಸದಾನಿಗಳೂ ಇಲ್ಲ. ಬ್ಯಾಕ್ಟೀರಿಯಗಳು ಕಶಾಂಗಗಳು ಸಹ ಭಿನ್ನವಾಗಿವೆ. ತದ್ವಿರುದ್ಧವಾಗಿ ಯೂಕ್ಯಾರಿಯೋಟುಗಳು ಸಂಕೀರ್ಣ ಬಗೆಯವು. ಈ ರೀತಿಯ ಸಂಕೀರ್ಣ ಜೀವನ ಪ್ರಾಯಶಃ ಎರಡೂ ರೀತಿಯ ಜೀವಕೋಶಗಳ ಒಡನಾಟದಿಂದ ಪ್ರಾರಂಭವಾಗಿರಬಹುದು. ಪರಸ್ಪರಾವಲಂಬನೆಯ ರೂಪದಲ್ಲಿ ಸೇರಿದ ಇವುಗಳಲ್ಲಿ ಪ್ರೋಕ್ಯಾರಿಯೋಟ್ ಜೀವಿಗಳನ್ನು ಯೂಕ್ಯಾರಿಯೋಟ್ ಜೀವಕೋಶ ಕಬಳಿಸಿ ಮೈಟೋಕಾಂಡ್ರಿಯಗಳು (ಡಿಎನ್‍ಎ ಯುಕ್ತ) ರೂಪುಗೊಂಡಿರಬಹುದು. ಇದೇ ರೀತಿ ನೀಲಿ ಹಸುರು ಪಾಚಿಗಳನ್ನು ಕಬಳಿಸಿ ಪ್ಲಾಸ್ಟಿಡ್‍ಗಳು ಪ್ರಾರಂಭವಾಗಿರಬಹುದು. ಕಲ್ಲು ಹೂಗಳಲ್ಲಿ ಕಾಣುವ ಪಾಚಿಶಿಲೀಂಧ್ರಗಳು ಒಡನಾಟ (ಪರಸ್ಪರಾವಲಂಬನೆ) ಮತ್ತು ಪ್ಲಾಸ್ಟಿಡ್ ಹಾಗೂ ಮೈಟೋಕಾಂಡ್ರಿಯಾಗಳಲ್ಲಿ ಕಾಣಬರುವ ಡಿಎನ್‍ಎ ಈ ವಾದಕ್ಕೆ ಪುಷ್ಟಿಕೊಡುವ ಅಂಶಗಳು. ಇದರ ಆಧಾರದ ಮೇಲೆ 4 ಸಾಮ್ರಾಜ್ಯಗಳ ಒಂದು ಮೂಲ ಫೈಲಾಜನೀಯನ್ನು ರಚಿಸಬಹುದು
.
	1 ಪ್ರೋಕ್ಯಾರಿಯೋಟ್ ಸಾಮಾಜ್ಯ(ಮಾನೀರ

	2 ಪರಸ್ಪರಾವಲಂಬನೆಯ ಮಾರ್ಪಾಟು(ಸ್ವಯಂಪೋಷಿ, ಪರಿಪೋಷಿಗಳಿಂದಾಗಿ ಪ್ರೋಟೋಕ್ಟಿಸ್ಟಾ.. ಇಂಥವುಗಳಲ್ಲಿ ನಿವಹಗಳು (ಕಾಲನಿ) ರೂಪುಗೊಂಡು ಬಹುಕೋಶಿ ಪಾಚಿಗಳಾಗಿರಬಹುದು. ದ್ಯುತಿಸಂಶ್ಲೇಷಣೆಯಿಲ್ಲದ ಯೂಕ್ಯಾರಿಯೋಟ್‍ಗಳಿಂದ ಶಿಲೀಂಧ್ರಗಳೂ ಪ್ರೋಟೊeóÉೂೀವಗಳಿಂದ ಪ್ರಾಣಿ ಸಾಮಾಜ್ಯವೂ ಹಸುರುಪಾಚಿಗಳಿಂದ ಸಸ್ಯಸಾಮ್ರಾಜ್ಯವೂ ಬೆಳೆದಿರಬಹುದು. ಆದರೆ ನಾಲ್ಕು ಸಾಮ್ರಾಜ್ಯಗಳ ಫೈಲಾಜನೀ ವಿಧಾನಕ್ಕೆ ಯಾವುದೇ ರೀತಿಯ ಒಮ್ಮತವಿಲ್ಲ.

	ಪ್ರಾಣಿ-ಫೈಲಾಜನೀಯ ಪ್ರಮುಖ ಮಜಲುಗಳು: ಯೂಗ್ಲಿನ ರೀತಿಯಲ್ಲಿ ಪ್ರಾಣಿಗಳು ಸಸ್ಯ ಮತ್ತು ಪ್ರಾಣಿಗಳ ನಡುವಿನ ಕೊಂಡಿಯಂತಿವೆ. (ಪರಪೋಷಣೆಗೆ ತಕ್ಕಂತೆ) ಹರಿತ್ತನ್ನು ಪಡೆಯುವ ಬದಲು ಸಂಕೀರ್ಣ ವ್ಯವಸ್ಥೆಯನ್ನು ರೂಢಿಸಿಕೊಂಡಿರುವ ಜೀವಿಗಳು ಪ್ರಾಣಿಸಮುದಾಯವಾಗಿದೆ. ಇವುಗಳಲ್ಲಿ ಜೀವಕೋಶದ ರಚನೆಯೂ ಸೇರಿದಂತೆ ರಚನೆಗೆ ಸಂಬಂಧಿಸಿದ ಮತ್ತು ಆಯಾ ವ್ಯವಸ್ಥೆಗೆ ಸಂಬಂಧಿಸಿದ ಬದಲಾವಣೆಗಳು ಇವೆ. ಏಕಕೋಶಿ ಪ್ರಾಣಿಗಳಿಂದ ಬಹುಕೋಶಿ ಪ್ರಾಣಿಗಳು, ಅಂಗಾಂಶ, ಅಂಗಸೌಷ್ಠವ, ವಲಯಗಳು, ತಲೆಯ ಪ್ರಾಮುಖ್ಯ ಮುಂತಾದವನ್ನು ವಿವಿಧ ಸ್ತರಗಳಲ್ಲಿ ರೂಪಿಸಿಕೊಂಡು ವಿಕಾಸಗೊಂಡಿವೆ. ಬಹುಕೋಶಿ ಪ್ರಾಣಿಯ ಉಗಮಕ್ಕೆ ವಿವಿಧ ರೀತಿಯ ಕಾರಣಗಳನ್ನು ಮುಂದಿಡಲಾಗಿದೆ. ಹೆಕೆಲನ ಗ್ಯಾಸ್ಟ್ರಿಯ ಸಿದ್ಧಾಂತದ ಪ್ರಕಾರ ವಾಲ್ವಾಕ್ಸ್‍ನಂಥ ನಿವಹಯುಕ್ತ ಪ್ರೋಟೊeóÉೂೀವಗಳಿಂದ ಬಹುಕೋಶಿ ಪ್ರಾಣಿಗಳು ಉಗಮಿಸಿವೆ. ಈ ರೀತಿಯ ಕಾಲ್ಪನಿಕ ಗ್ಯಾಸ್ಟ್ರಿಯಾಸ್ ಪ್ರಾಣಿ ಹವಳ ಅಥವಾ ಲೋಳೆ ಮೀನುಗಳಂತೆ ಇದ್ದಿರಬಹುದು. ಈ ಅಭಿಪ್ರಾಯಕ್ಕೆ ಫೈಲಾಜನೀ ಮಹತ್ತ್ವವನ್ನು ಭ್ರೂಣಾವಸ್ಥೆಯ ಹೊಂದಾಣಿಕೆಗಳು ಪೂರಕವಾಗಿ ದೊರಕಿಸಿಕೊಡಲಾರವು. ಪ್ಲಾನುಲ ರೀತಿಯಲ್ಲಿ ಬಹುಕೋಶಿಗಳ ಉಗಮವಾಗಿದೆ ಎಂದು ಮತ್ತೆ ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಸೀಲಿಯೇಟ್‍ಗಳಿಂದ ಚಪ್ಪಟೆ ಹುಳುಗಳು ಉಗಮಿಸಿರಬಹುದೆಂಬ ವಾದವೂ ಉಂಟು. ಬಹುಕೋಶಿ ಸಸ್ಯಗಳ ಹರಿತ್ತಿನ ನಾಶದಿಂದ ಪ್ರಾಣಿಗಳು ರೂಪಗೊಂಡಿವೆ ಎಂದೂ ಕೆಲವರ ಅಭಿಮತ. ಹೀಗೆ ಒಮ್ಮತಾಭಿಪ್ರಾಯ ಇಲ್ಲದಿದ್ದರೂ ಪ್ರೋಟಿರೋಸ್ಟಾಂಜಿಯದಂಥ ನಿವಹಯುಕ್ತ ಪ್ರೋಟೊeóÉೂೀವಗಳ ಮಟ್ಟದಲ್ಲಿ ಬುಹುಕೋಶ ವ್ಯವಸ್ಥೆ ಆರಂಭವಾಗಿದೆ ಎಂಬುದು ಗಮನಾರ್ಹ.

	ಅಂಗಸೌಷ್ಠವ: ಒಂದು ಅಕ್ಷದ ಮೇಲೆ ಅಂಗಗಳ ಜೋಡಣೆಯೇ ಅಂಗಸೌಷ್ಠವ. ಕೆಲವು ಏಕಕೋಶಿಗಳಲ್ಲಿ ಮತ್ತು ಸ್ಪಂಜುಗಳಲ್ಲಿ ಅಂಗಸೌಷ್ಠವ ಅನಿಯತವಾಗಿಯಾದರೆ ಅನೇಕ (ಪ್ರೋಟೊಜೋವ) ಏಕಕೋಶಿಗಳಲ್ಲಿ ಸ್ಪಂಜುಗಳಲ್ಲಿ ಕುಟುಕುಕಣದಂತಗಳಲ್ಲಿ ಸ್ಥಿರವಾಸಕ್ಕೆ ಅನುಗುಣವಾಗಿ ಅಂಗಸೌಷ್ಠವ ಆ ರೀಯ ರೀತಿಯದ್ದಾಗಿದೆ. ದ್ವಿಪಾಶ್ರ್ವ ಅಂಗಸೌಷ್ಠವವೂ ಬಹುತೇಕ ಪ್ರಾಣಿಗಳಲ್ಲಿ ಉಂಟು. ಈ ಬಗೆಯ ಸೌಷ್ಠವಕ್ಕೆ ಆಯ್ಕೆ ಅನುಕೂಲತೆ ಇರುವುದರಿಂದ ಇದು ವ್ಯಾಪಕವಾಗಿ ಕಾಣಬರುತ್ತದೆ.

	ಅಂಗಾಂಶ ಅಂಗಗಳ ಆರಂಭ: ಏಕಕೋಶಿಗಳು ಮತ್ತು ಸ್ಪಂಜುಗಳು ಬರಿಯ ಜೀವ ಕೋಶ ಉಳ್ಳ ಪ್ರಾಣಿಗಳು. ಇವುಗಳಲ್ಲಿ ಅಂಗಾಂಶಗಳಾಗಲೀ ಅಂಗಮಂಡಲಗಳಾಗಲೀ ಇಲ್ಲ. ಮೀಸೊeóÉೂೀವ ಮತ್ತು ಸೀಲೆಂಟೆರೇಟಗಳಲ್ಲಿ ಅಂಗಾಂಶಗಳು ಮಾತ್ರ ಇವೆ. ನಾಳೆ ಮಂಡಲದಿಂದ ಸಂಕೀರ್ಣವಾದರೂ ಎರಡು ಪದರ ಕೋಶಗಳನ್ನು ಪ್ರತ್ಯೇಕಿಸುವ ಮೀಸೋಗ್ಲಿಯ ಲೋಳೆಯಂತಿದ್ದು ಜೀವಕೋಶರಹಿತವಾಗಿದೆ. ಮಧ್ಯಪದರವನ್ನು ಪಡೆದಿರುವ ಚಪ್ಪಟೆಹುಳುಗಳಲ್ಲಿ ಸ್ನಾಯುಗಳೂ ರೂಪುಗೊಂಡು ಅಂಗಾಂಗಗಳು ಆರಂಭ ಹಂತದಲ್ಲಿವೆ. ಆದರೆ ಅಂಗಗಳಿಗೆ ಅವಕಾಶವೀಯುವ ದೇಹಾಂತರಾವಕಾಶ (ಸೀಲೋಮ್) ಬೆಳೆದಿಲ್ಲ. ದುಂಡು ಹುಳುಗಳಲ್ಲಿ ಮಿಥ್ಯಸೀಲೋಮ್ ಪ್ರಾರಂಭವಾಗಿ ವಲಯವಂತಗಳಲ್ಲಿ ವೃದ್ಧಿಗೊಂಡು ಉಳಿದವುಗಳಲ್ಲಿ ನಾನಾರೂಪದಲ್ಲಿ ಪ್ರಕಟಗೊಂಡಿದೆ. ಇದರ ಆಧಾರದ ಮೇಲೆ ಏಸೀಲೋಮೇಟ್, ಸೂಡೂಸೀಲೋಮೇಟ್, ಯೂಸೀಲೋಮೇಟ್ ಎಂದು ಕ್ರಮವಾಗಿ ಗುಂಪುಗಳನ್ನು ದರ್ಜೆಗಳಾಗಿ ವಿಂಗಡಿಸಲಾಗಿದೆ. ಸೀಲೋಮ್‍ಗೆ ಸೇರಿದಂತೆಯೇ ಅಂಗಮಂಡಲಗಳು ವಿಕಾಸಗೊಂಡಿವೆ.

	ವಲಯರಚನೆ (ಮೆಟಮೆರಿಸಮ್): ಅಂಗಗಳು ಉÀಂಟಾದಂತೆಯೇ ವಲಯಗಳೂ ದೇಹಚಲನೆಗೆ ತಕ್ಕಂತೆ ರೂಪುಗೊಂಡಿರುವುದನ್ನು ಗಮನಿಸಬಹುದು. ವಲಯವಂತಗಳಲ್ಲಿ, ಸಂಧಿಪದಿಗಳಲ್ಲಿ, ಕಾರ್ಡೇಟುಗಳಲ್ಲಿ ಇದು ಗಮನಾರ್ಹ. ಹಾವುಗಳ ಚಲನೆಗೂ ಸ್ನಾಯುಗಳ ವ್ಯವಸ್ಥೆಗೂ ಸಂಬಂಧ ಇರುವುದು ವಲಯರಚನೆಯಿಂದ. ವಲಯರಚನೆ ಎರಡು ದಿಕ್ಕಿನಲ್ಲಿ ವಿಕಾಸಗೊಂಡಿದೆ; ಅಧಿಕ ಸಂಖ್ಯೆಯ ವಲಯಗಳನ್ನು ಪಡೆದಿರುವ ವಲಯವಂತಗಳದ್ದು ಮತ್ತು ಸಂಧಿಪದಿಗಳದ್ದು ಒಂದು ಗುಂಪಾದರೆ ಮಿತಸಂಖ್ಯೆಯ ವಲಯರಚನೆಯನ್ನು ತೋರುವ ಕಠಿಣಚರ್ಮಿ ಹಾಗೂ ಕಾರ್ಡೇಟುಗಳದ್ದು ಮತ್ತೊಂದು ಗುಂಪು.

	ತಲೆಯ ರಚನೆ: ಇಡೀ ದೇಹದ ನಿಯಂತ್ರಕವಾಗಿ ಅಮೂಲ್ಯವಾದ ಮಿದುಳು, ಜ್ಞಾನೇಂದ್ರಿಯಗಳು ಮತ್ತು ಆಹಾರಸೇವನಾಭಾಗಗಳನ್ನು ಪಡೆದ ತಲೆ ದೇಹದ ಮುಂಭಾಗದಲ್ಲಿ ರಚಿತವಾಗಿದೆ. ಇದು ಚಪ್ಪಟೆ ಹುಳುಗಳಲ್ಲಿ ಸ್ಕೋಲೆಕ್ಸ್ ಎಂಬುದಾಗಿ ಆರಂಭವಾಗಿ, ಸಂಧಿಪದಿ, ಕ್ರಸ್ಟೇಶಿಯ ಮತ್ತು ಕೀಟಗಳಲ್ಲಿ ಉತ್ತಮವಾಗಿ ಬೆಳೆದು ಕಾರ್ಡೇಟುಗಳಲ್ಲಿ ಅದರಲ್ಲೂ ಸ್ತನಿಗಳಲ್ಲಿ ಉತ್ತುಂಗ ಹಂತವನ್ನು ತಲಪಿದೆ.
	ಹೊಂದಾಣಿಕಾ ಪ್ರಸರಣ: ವಿವಿಧ ಪರಿಸರಗಳಿಗೆ ತಕ್ಕಂತೆ ಒಂದೇ ಗುಂಪಿನ ಪ್ರಾಣಿಗಳು ಅಥವಾ ಒಂದು ಅಂಗಮಂಡಲದ ಭಾಗಗಳು ವೈವಿಧ್ಯಮಯವಾಗಿರುತ್ತವೆ. ಏಕಮುಖ ವಿಕಾಸ ಅಥವಾ ದ್ವಿಮುಖ ವಿಕಾಸ ಹೊಂದಾಣಿಕಾ ಪ್ರಸರಣಕ್ಕೆ ಅನುವು ಮಾಡಿಕೊಡಬಹುದು. ಸರೀಸೃಪಗಳ ವಿಭಿನ್ನ ಜೀವನಕ್ರಮ, ಪಕ್ಷಿಗಳ ಕೊಕ್ಕು ಅಥವಾ ಕಾಲುಗಳು, ಸ್ತನಿಗಳ ಹಲ್ಲುಗಳು ಹೊಂದಾಣಿಕಾ ಪ್ರಸರಣಕ್ಕೆ ಉತ್ತಮ ಉದಾಹರಣೆಗಳು.

	ಪ್ರಾಣಿಗಳ ಫೈಲಾಜನೀಗೆ ಸಂಬಂಧಿಸಿದಂತೆ ಎರಡು ಗುಂಪಿನ ವ್ಯವಸ್ಥೆ ಇದೆ. ಏಕಮುಖ ಹಾಗೂ ದ್ವಿಮುಖ ಫೈಲಾಜನೀಗಳೇ ಈ ಎರಡು ವ್ಯವಸ್ಥೆಗಳು. ಏಕಮುಖ ವ್ಯವಸ್ಥೆಗೆ (ಮಾನೊಫೈಲೆಟಿಕ್) ಸೀಲೋಮ್ ಆಧಾರ. ಬ್ರೆಜಿಲ್‍ನ ಅರ್ನ್‍ಸ್ಟ್ ಮಾರ್ಕಸ್ ಪ್ರಕಾರ ಸೀಲೋಮ್ ಇಲ್ಲದ ಏಸೀಲೋಮೇಟ್‍ಗಳು ಕೆಳದರ್ಜೆಯವು; ಸೀಲೋಮ್ ಉಳ್ಳವು (ಸೀಲೋಮೇಟ್) ಮುಂದುವರೆದವು. ಯುಗೋಸ್ಲಾವಿಯದ ಹಡ್ಜಿ ಎಂಬಾತ ಇದೇ ವಿಧಾನದಲ್ಲಿ ನೇರ ಫೈಲಾಜನೀಯನ್ನು ರಚಿಸಿದ್ದಾನೆ. ಇದರ ಪ್ರಕಾರ ವಲಯವಿಲ್ಲದ ಏಮೀರಿಯ, ಮಿತವಲಯಗಳುಳ್ಳ ಆಲಿಗೋಮೀರಿಯ, ಬಹುವಲಯಯುಕ್ತ ಪಾಲಿಮೀರಿಯ ಮತ್ತು ಕಾರ್ಡೀನಿಯ ಎಂಬ ಪ್ರಾಣಿಗುಂಪುಗಳನ್ನು ಗುರುತಿಸಲಾಗಿದೆ. ಆರಂಭದಲ್ಲಿ ಇದಕ್ಕೆ ಪ್ರಬಲ ಬೆಂಬಲವಿತ್ತಾದರೂ ಇದರ ಮಹತ್ತ್ವ ಈಗ ಇಳಿಮುಖವಾಗಿದೆ. ದ್ವಿಮುಖ (ಡೈಫೈಲೆಟಿಕ್) ಫೈಲಾಜನೀಯಲ್ಲಿ ಪ್ರೋಟೀರೊಸ್ಟೋಮಿಯ ಮತ್ತು ಡ್ಯೂಟಿರೊಸ್ಟೋಮಿಯ ಎಂದು ಅಕಶೇರುಕ ಹಾಗೂ ಕಾರ್ಡೇಟ್ ಹಾದಿಗಳನ್ನು ಗುರುತಿಸಲಾಗಿದೆ. ಪ್ರೋಟೀರೊಸ್ಟೋಮಿಯ ಗುಂಪಿನವುಗಳಲ್ಲಿ ಭ್ರೂಣದ ಪ್ರಮುಖ ಹಂತ ಗ್ಯಾಸ್ಟ್ರುಲದ ಬ್ಲಾಸ್ಟೋಪೋರ್ ಭಾಗ ಪ್ರೌಢಜೀವಿಯಲ್ಲಿ ಬಾಯಿಯಾಗಿ ಉಳಿಯುವುದು. ಆದ್ದರಿಂದ ಇವನ್ನು ಆರಂಭಿಕ ಬಾಯಿಉಳ್ಳ ಗುಂಪು ಎನ್ನಬಹುದು. ಸಾಮಾನ್ಯವಾಗಿ ಅಕಶೇರುಕಗಳನ್ನು ಒಳಗೊಂಡ ಇವನ್ನು ವಲಯವಂತ ಸಂಧಿಪದಿಗಳ ಹಾದಿ ಎಂದೂ ಗುರುತಿಸುವರು. ಅಲ್ಲದೆ ಸುರುಳಿ ಅಥವಾ ನಿರ್ಧಾರಕ ವಿದಳನ, ಮಧ್ಯದರ್ಮ ಒಡೆದು ಬರುವ ಸ್ಕೀಜೋಸೀಲ್ ಸೀಲೋಮ್ ಭ್ರೂಣ ಬಾಯಿಯೇ ಪ್ರೌಢಬಾಯಿಯಾಗುವುದು. ಟ್ರೋಕೋಫೋರ್‍ನಂಥ ನಿರ್ದಿಷ್ಟ ಡಿಂಬ ಮುಂತಾದ ಲಕ್ಷಣಗಳನ್ನು ಇವುಗಳಲ್ಲಿ ಗಮನಿಸಬಹುದು.

	ಇದಕ್ಕೆ ತದ್ವಿರುದ್ಧವಾಗಿ ಡ್ಯೂಟಿರೊಸ್ಟೋಮಿಯದ ಪ್ರೌಢಜೀವಿಗಳಲ್ಲಿ ಬಾಯಿ ಹೊಸದಾಗಿ ರೂಪುಗೊಳ್ಳುವುದು; ಬ್ಲಾಸ್ಟೊಪೋರ್ ಗುದರಂಧ್ರವಾಗುತ್ತದೆ. ಅಲ್ಲದೆ ಇವುಗಳಲ್ಲಿ ಸುರುಳಿ ಅಥವಾ ನಿರ್ಧಾರಕ ವಿದಳನವಿಲ್ಲ. ಕರುಳಿನಿಂದ ಹೊರಚಾಚಿದ ಚೀಲಗಳು(ಎಂಟಿರೋಸೀಲ್ ಸೀಲೋಮ್ ಆಗುತ್ತವೆ. ಸಾಮಾನ್ಯ ಡಿಂಬಾವಸ್ಥೆಯೂ ಇಲ್ಲ. ಕಠಿಣಚರ್ಮಿ(ಕಾರ್ಡೇಟ್ ಹಾದಿಯ ಈ ಗುಂಪು ಕಾರ್ಡೇಟುಗಳ ಗುಂಪಿನಲ್ಲಿ ಪರ್ಯವಸಾನಗೊಳ್ಳುತ್ತದೆ.

	ಕಾರ್ಡೇಟುಗಳ ಉಗಮ: ಪ್ರಾಯಶಃ ಎಲ್ಲ ಅಕಶೇರುಕ ಗುಂಪುಗಳನ್ನೂ ಕಾರ್ಡೇಟುಗಳ ಉಗಮದ ಮೂಲವೆಂದು ಭಾವಿಸಲಾಗುವುದು. ನೋಟೊಕಾರ್ಡ್ (ಬೆನ್ನುಹುರಿ), ನರಹುರಿ, ಮತ್ತು ಐದು ಜೊತೆ ಕಿವಿರು ರಂಧ್ರಗಳು ಇವುಗಳ ಪ್ರಮುಖ ಲಕ್ಷಣಗಳು. ಕಠಿಣ ಚರ್ಮಿಗಳಲ್ಲಿ ಕಾರ್ಡೇಟುಗಳಲ್ಲಿನ ಆದಿ ಕಾರ್ಡೇಟುಗಳ ಲಕ್ಷಣ ಉಂಟು. ಅರೆಕಾರ್ಡೇಟುಗಳು, ಟಾರ್ನೇರಿಯ ಮತ್ತು ಕಠಿಣಚರ್ಮಿಗಳು, ಬೈಪಿನೇರಿಯ ಡಿಂಬಗಳಲ್ಲಿ ಸಾಮ್ಯತೆ ಇದೆ. ಆದ್ದರಿಂದ ಪ್ರೀಕೇಂಬ್ರಿಯನ್ ಕಾಲದ ಡೈಪ್ಲೂರುಲ ರೀತಿಯ ಡಿಂಬ ಕಾರ್ಡೇಟುಗಳ ಮೂಲವಾಗಿರಬಹುದೆಂದು ಬಗೆಯಲಾಗಿದೆ. ಈ ರೀತಿ ಆದಿಕಾರ್ಡೇಟುಗಳಾಗಿ ರೂಪುಗೊಂಡ ಕಾರ್ಡೇಟುಗಳು ದವಡೆರಹಿತ ಮೀನುಗಳಾಗಿ (ಲ್ಯಾಂಪ್ರೆಗಳು) ವಿಕಸನಗೊಂಡಿವೆ. ಇವು ಪ್ಲ್ಯಾಕೋಡರ್ಮ್‍ಗಳ ಹಂತ ದಾಟಿ ಮೃದ್ವಸ್ಥಿ ಶಾರ್ಕ್ ಮೀನುಗಳಾಗಿವೆ. ಶಾರ್ಕ್‍ಗಳಿಂದ ಮೂಳೆಮೀನುಗಳೂ ಇವುಗಳಿಂದ ರೇಮುಳ್ಳು ಮತ್ತು ದಳಮುಳ್ಳು ಮೀನುಗಳೆಂಬ ಎರಡು ಗುಂಪುಗಳೂ ರೂಪುತಳೆದಿವೆ. ಸಿಹಿನೀರುವಾಸಿ ದಳಮುಳ್ಳು ಮೀನುಗಳಿಂದ ಉಭಯವಾಸಿಗಳೂ ದ್ವಿಚರಿಗಳಿಂದ ಸರೀಸೃಪಗಳೂ ಸರೀಸೃಪಗಳಿಂದ ಪಕ್ಷಿ ಮತ್ತು ಸ್ತನಿಗಳೂ ರೂಪುಗೊಳ್ಳುವ ವಿಕಾಸ ಕ್ರಿಯೆ ಮಾನವನವರೆಗೆ ಅವ್ಯಾಹತವಾಗಿ ಸಾಗಿದೆ. ಪ್ರೀಕೇಂಬ್ರಿಯನ್ ಕಾಲದ ಸಸ್ಯಗಳಿಂದ ದೊರೆತ ಆಕ್ಸಿಜನ್ ವಿಭಿನ್ನ ರೀತಿಯ ಸಸ್ಯ ಮತ್ತು ಪ್ರಾಣಿಗಳ ಉಗಮಕ್ಕೆ ಕಾರಣವಾಯಿತೆನ್ನಬಹುದು. ಆಯ್ಕೆಗೆ ತಕ್ಕಂತೆ ಹೊಂದಾಣಿಕೆ-ಭಿನ್ನತೆಗಳು ವ್ಯತ್ಯಯಗಳ ಮೂಲಕ ಉಂಟಾಗಿವೆ. ಹೀಗೆ ಅತಿಸರಳ ರೀತಿಯವುಗಳಿಂದ ಮುಂದುವರೆದ ಗುಂಪುಗಳು ಜನಿಸಿವೆ. ಒಟ್ಟಾರೆ ಫೈಲಾಜನೀಯ ಅಭ್ಯಾಸದಿಂದ ಜೀವಿಮೂಲಗಳನ್ನೂ ವಿಕಾಸದ ಹಂತಗಳನ್ನೂ ಅರಿಯುವುದು ಸಾಧ್ಯವಾಗಿದೆ.
		(ಟಿ.ವಿ.ಎಚ್‍ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ